Chief Editor
Manohar. R (Manu)
Photo Journalist
chitrataramanu@gmail.com
+91 9845549026
ದೂರದರ್ಶನದ ಸುತ್ತ ಭಾವನೆಗಳ ಹುತ್ತ... 3.5/5 ****
Posted date: 05 Sun, Mar 2023 03:22:25 PM
 ಗತಕಾಲದ ಕಥೆ ಇಟ್ಟುಕೊಂಡು  ಸಿನಿಮಾ ಮಾಡುವಾಗ ಸಾಕಷ್ಟು ಮುಂಜಾಗ್ರತೆ ವಹಿಸಬೇಕು. ಇಲ್ಲಿ ಬರುವ ಪ್ರತಿ ಪಾತ್ರ ಹಾಗೂ ದೃಶ್ಯಗಳನ್ನು ಅದೇರೀತಿ ತೋರಿಸಬೇಕಿರುತ್ತದೆ. ಆ ನಿಟ್ಟಿನಲ್ಲಿ 80  ರ ದಶಕದಲ್ಲಿ ಆಗಿನ್ನೂ ಟಿವಿ ಹೊಸದಾಗಿ ಕಾಲಿಟ್ಟ  ಸಮಯದಲ್ಲಿ ನಡೆಯುವ ಕಥೆಯನ್ನು ನಿರ್ದೇಶಕ ಸುಖೇಶ್‌ಶೆಟ್ಟಿ ಅವರು ದೂರದರ್ಶನ ಎನ್ನುವ ಹೆಸರಿನಲ್ಲೇ  ತೆರೆಮೇಲೆ ತಂದಿದ್ದಾರೆ. ತಾವೇ ನೋಡಿದ, ಕೇಳಿದ ಕೆಲವು ನೈಜಘಟನೆಗಳನ್ನು  ಇಟ್ಟುಕೊಂಡು ಟಿವಿಯೊಂದರ ಸುತ್ತ ನಡೆಯುವ ಕಥೆಯನ್ನವರು ಹೇಳಿದ್ದಾರೆ. ಸ್ನೇಹ, ಪ್ರೀತಿ, ಪ್ರೇಮ, ದ್ವೇಷ, ಅಸೂಯೆ,  ಅಹಂಕಾರ ಹೀಗೆ ಹಲವು ದೃಷ್ಟಿಕೋನಗಳಲ್ಲಿ  ದೂರದರ್ಶನ ಚಿತ್ರವನ್ನು  ನಿರೂಪಿಸಿದ್ದಾರೆ. 

ಪಶ್ಚಿಮಘಟ್ಟದ ಸುಂದರ ಪರಿಸರದ ನಡುವೆ ಇರುವ ಊರಲ್ಲಿ  ನಡೆಯುವ ಕಥೆಯಿದಾಗಿದೆ. ಆ ಊರಿನ ಮುಖ್ಯಸ್ಥ ರಾಮಕೃಷ್ಣ ಭಟ್ಟ (ಸುಂದರ್) ಪತ್ನಿ(ಹರಿಣಿ) ಒಬ್ಬನೇ ಮಗ ಮನು (ಪೃಥ್ವಿಅಂಬರ್) ಹೀಗೆ ಅವರದು ಚಿಕ್ಕ ಕುಟುಂಬ. ಇಲ್ಲಿ ತಂದೆ ಮಗನ ನಡುವೆ ಆಗಾಗ ಮನಸ್ತಾಪ ಉಂಟಾದಾಗ ತಾಯಿ(ಹರಿಣಿ) ಮಧ್ಯೆ ಪ್ರವೇಶಿಸಬೇಕಾಗುತ್ತದೆ. ದೇಶಕ್ಕೆ ಆಗಿನ್ನೂ ಟಿವಿ ಎಂಬ ಮಾಯಾಪೆಟ್ಟಿಗೆ ಎಂಟ್ರಿ ಕೊಟ್ಟ ಕಾಲವದು. ಆ ಊರಿಗೆ ಯಾವುದೇ ಹೊಸ ವಸ್ತು ಬಂತೆಂದರೆ ಅದು ಮೊದಲು ಭಟ್ಟರ ಮನೆಗೇ ಸೇರೋದು. 

ನ್ಯಾಯಬೆಲೆ ಅಂಗಡಿ ನೋಡಿಕೊಳ್ಳುವ ಜವಾಬ್ದಾರಿ ಹೊತ್ತ ಮನು ತನ್ನ ಗೆಳೆಯರ ಜೊತೆಸೇರಿ ಊರಲ್ಲಿ ನಾಟಕ ಮಾಡಲು ಮುಂದಾಗುತ್ತಾನೆ. ಗೆಳೆಯ ಕಿಟ್ಟಿ(ಉಗ್ರಂ ಮಂಜು) ಜೊತೆಗಿನ ದ್ವೇಷವೂ ಅದಕ್ಕೆ ಕಾರಣವಾಗಿರುತ್ತೆ. ಇದರ ನಡುವೆ  ಗೆಳತಿ ಮೈತ್ರಿ(ಅಯಾನಾ)ಯ ಜೊತೆಗಿನ ಲವ್ ಸ್ಟೋರಿ ಕೂಡ ಮುಂದುವರಿಯುತ್ತದೆ. 

ಮುಂದೆ ರಾಮಕೃಷ್ಣಭಟ್ಟ ಹಾಗೂ ಆತನ ಸಹೋದರ(ರಘು ರಾಮನಕೊಪ್ಪ)ನ ನಡುವೆ ಆಸ್ತಿ ಕುರಿತು ವಿವಾದ ಉಂಟಾಗಿ  ಇಬ್ಬರ ಬಾಂಧವ್ಯದಲ್ಲಿ ಬಿರುಕು ಮೂಡುತ್ತದೆ. ಈ ನಡುವೆ ಬಾಮೈದ ಕಳಿಸಿದ ಟಿವಿಯನ್ನು ಕೆಲ ದಿನಗಳಮಟ್ಟಿಗೆ ಮನೆಯಲ್ಲಿಟ್ಟುಕೊಳ್ಳಬೇಕಾಗುತ್ತದೆ.

ಇಡೀ ಊರಿಗೆ ರಾಮಕೃಷ್ಣ ಭಟ್ಟರ ಮನೆಯಲ್ಲಿರುವ ಟಿವಿಯೊಂದೇ ಆಕರ್ಷಣೆ.  ದೂರದರ್ಶನದಲ್ಲಿ  ರಾಮಾಯಣ, ಚಿತ್ರಹಾರ್‌ನಂಥ ಕಾರ್ಯಕ್ರಮಗಳನ್ನು ನೋಡಲು ಜನ ಭಟ್ಟರ ಮನೆಗೆ ಮುಗಿಬೀಳುತ್ತಾರೆ. ಹೀಗೆ ಸಾಗುವ ಹಾದಿಯಲ್ಲಿ ಒಂದಷ್ಟು ಏರುಪೇರುಗಳ ನಡುವೆ ಒಂದುದಿನ ಅವರ ಮನೆಯಲ್ಲಿದ್ದ ಟಿವಿಯೇ ಕಳ್ಳತನವಾಗುತ್ತದೆ. ಇಲ್ಲಿಂದ ಚಿತ್ರದ ಓಟ ಹೊಸ ತಿರುವನ್ನು ಪಡೆದುಕೊಳ್ಳುತ್ತದೆ. ಟಿವಿಯನ್ನು ಯಾರು ಕದ್ದಿರುತ್ತಾರೆ, ಎಂಬ ಅಂಶದ ಮೇಲೆ ಮುಂದಿನ ಕಥೆ ತೆರೆದುಕೊಳ್ಳುತ್ತದೆ. 
ನಿರ್ದೇಶಕ ಸುಕೇಶ್‌ಶೆಟ್ಟಿ ಅವರು ತನ್ನ ಪ್ರಥಮ ಪ್ರಯತ್ನದಲ್ಲಿ ೧೯೮೦ರ ಕಾಲಘಟ್ಟದ ಕಥೆಯನ್ನು ಆಯ್ಕೆ ಮಾಡಿಕೊಂಡು  ತೆರೆಮೇಲೆ ತಂದಿದ್ದಾರೆ. ಪ್ರೀತಿ, ಗೆಳೆತನ,  ಮಾನವೀಯತೆಯ ಮೌಲ್ಯ, ಸಂಬಂಧಗಳಿಗೆ ಕೊಂಡಿಯಾಗಿ ಟಿವಿಯನ್ನು  ಪ್ರಧಾನವಾಗಿಟ್ಟುಕೊಂಡು ಕಥೆ ಹೇಳಿದ್ದಾರೆ.  ಟಿವಿ ಬರುವ ಮೊದಲು ಜನ ನೋಡುವ ರೀತಿ ಹಾಗೂ ಆ ಮನೆಗೆ ಟಿವಿ ಬಂದ ನಂತರ ಬದಲಾಗುವ ದೃಷ್ಟಿಕೋನವನ್ನು ತೆರೆದಿಡುವ ಪ್ರಯತ್ನ ಮಾಡಿದ್ದಾರೆ.

ವಾಸುಕಿ ವೈಭವ ಅವರ ಸಂಗೀತದಲ್ಲಿ ಒಂದು ಹಾಡು ಗುನುಗುವಂತಿದೆ. ಅರುಣ್ ಸುರೇಶ್ ಅವರು  ತಮ್ಮ ಕ್ಯಾಮೆರಾದಲ್ಲಿ ೮೦ರ ಕಾಲಘಟ್ಟವನ್ನು ಸುಂದರವಾಗಿ ತೆರೆದಿಟ್ಟಿದ್ದಾರೆ. ಇನ್ನು ನಾಯಕ ಪೃಥ್ವಿ ಅಂಬರ್  ಮನೆಯ ಮಗನಾಗಿ, ಗೆಳೆಯನಾಗಿ, ಪ್ರೇಮಿಯಾಗಿ, ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಾಯಕಿ ಅಯಾನಾ ಕೂಡ ಸಿಕ್ಕ ಅವಕಾಶದಲ್ಲಿ  ಉತ್ತಮ ಅಭಿನಯ ನೀಡಿದ್ದಾರೆ. ಬಾಲ್ಯದ ಗೆಳೆಯನಾಗಿ ಉಗ್ರಂ ಮಂಜು ವಿಭಿನ್ನ  ಅಭಿನಯದ ಮೂಲಕವೇ ಗಮನ ಸೆಳೆಯುತ್ತಾರೆ.   

ಇಡೀ ಚಿತ್ರದ ಕೇಂದ್ರಬಿಂದು  ಎಂದರೆ ಭಟ್ಟರ ಪಾತ್ರಧಾರಿ ಸುಂದರ್. ತಮ್ಮ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡುವ ಮೂಲಕ ವೀಕ್ಷಕರ ಗಮನ ಸೆಳೆಯುತ್ತಾರೆ. ಇನ್ನು ಸಹೋದರನ ಪಾತ್ರದಲ್ಲಿ ರಘು ರಾಮನಕೊಪ್ಪ ತಮ್ಮ ಪಾತ್ರಕ್ಕೆ ಜೀವತುಂಬಿ ನಟಿಸಿದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ದೂರದರ್ಶನದ ಸುತ್ತ ಭಾವನೆಗಳ ಹುತ್ತ... 3.5/5 **** - Chitratara.com
Copyright 2009 chitratara.com Reproduction is forbidden unless authorized. All rights reserved.